Saturday, July 23, 2016

"ಬಾಳೆಂಬ ಹಬ್ಬದಲ್ಲಿ ಪಾತ್ರ"

ನಾನು ನಾನಾದೆನು ಎಂಬಲ್ಲಿಂದ ನಾನಿಲ್ಲ ಇಲ್ಲಿ ಅನ್ನೋ ಬಾಳಿನ ಪಯಣವಿದು. ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತನೋ? ಅಘೋರ ಶಿಕ್ಷೆಯೋ ಸತ್ಯವಾಗಿಯೂ ನಾನರಿಯೆ. ಸತ್ಯವೆಂಬ ಕಹಿ ವಿಷ ಅರಗಿಸಿಕೊಳ್ಳಲು ಮನಸು ಮಾಗಲೇ ಇಲ್ಲ. ಅಂದುಕೊಂಡ ಬದುಕು ದಕ್ಕಿಸಿಕೊಳ್ಳಲು ಮಾಡದ ಕೆಲಸವಿಲ್ಲ. ಆಡದ ಆಟವಿಲ್ಲ.

ಬದುಕಿನ ಪಯಣದಲ್ಲಿ ನಾನು ಬದುಕಿದ್ದೇನೆ ಎಂಬುದೇ ದೊಡ್ಡ ಸಾಧನೆ. ಏನಾಗಲೀ ಮುಂದೆ ಸಾಗು ನೀ, ನಡೆ ಮುಂದೆ ನಡೆ ಮುಂದೆ ಎಂಬಂತಹ ಮಾತುಗಳು ಮನಸಲ್ಲಿದ್ದರೂ, ನಾನು ಮುನ್ನಡೆಯಲೇ ಇಲ್ಲ. ಎಡತಾಕಿಸಿಕೊಂಡದ್ದು ಮನಸಿನೊಳಗಿನ ಬೇಗೆಯ ಜೊತೆ, ದುಷ್ಟತನವನ್ನು.

ತನ್ನದೇ ತಪ್ಪಿಗೆ ಆಯಸ್ಸು ಪೂರ್ತಿ ಮಾನಸಿಕ ಕ್ಷೋಭೆ ಅನುಭವಿಸಬೇಕಾದ ಸ್ಥಿತಿ ನನ್ನದೀಗ. ಮಾಡಿಕೊಂಡ ಅಮಾನವೀಯ ತಪ್ಪುಗಳಿಗೆ ಶಿಕ್ಷೆ ಮುಗಿಯದು, ನನ್ನ ಬದುಕಿನ್ನುದ್ದಕ್ಕೂ!!.

ಬಾಳಿಗೆ ಬಂದ ನವಜ್ಯೋತಿಯ ನವಿರು ಬೆಳಕಿನ ನಡುವೆಯೂ, ನಾನು ಬೆಳಕು ಕಂಡುಕೊಳ್ಳದೆ ಕತ್ತಲಿನ ಮನಸಿನೊಂದಿಗೆಯೇ ಹೊಂದಾಣಿಕೆ ಮಾಡಿಕೊಂಡೆ. ತಪ್ಪು ಜಗತ್ತಿನ ಒಪ್ಪ ಓರಣಕ್ಕೆ ನನ್ನನ್ನೇ ಮಾರಿಕೊಂಡೆ. ಮುಗ್ಧ ಪ್ರೇಯಸಿಯ ಮಾತೃ ಪ್ರೀತಿಗೆ ಅನರ್ಹನೆಂದು ನನ್ನೊಳಗೆ ನನ್ನ ಕೊಂದುಕೊಂಡೆ.

ಅವರಿವರ ಮಾತು ಕೇಳಿ ಬಂಗಾರದ ಬದುಕನ್ನು ಒದೆಯಬೇಡಿ ಎಂದು ಎಲ್ಲರಿಗೂ ಹೇಳಿ, ನಾನೇ ನನ್ನ ಬಾಳನ್ನು ಹೇಸಿಗೆ ಮಾಡಿಕೊಂಡೆ. ಎಲ್ಲರೊಳಂದಾಗು ಮಂಕುತಿಮ್ಮ ಎಂಬ ಮಾತು, ನನಗೆ ಅತಿಶಯ ಉಕ್ತಿ ಆಗಿದ್ದು ತಪ್ಪಲ್ಲ. ನನ್ನ ಮೊಂಡುತನವೇ ನನ್ನವಳಿಗೆ ಭಯ ಹುಟ್ಟಿಸುವ ವಿಷಯ ಆಗಿದ್ದು ಮತ್ತೊಂದು ಪ್ರಮಾದ.

ಎಲ್ಲರ ನಂಬಿ ಹಾಳಾದೆ ಅನ್ನೋದು ಸತ್ಯವೇ ಆದರೂ, ಸ್ವಂತಿಕೆ ಇಲ್ಲದ ಬುದ್ಧಿ ಇದ್ದರೆಷ್ಟು? ಇಲ್ಲದಿರೆಷ್ಟು. ಮಾಡ್ಕೊಂಡಿರೋ ತಪ್ಪು ಸಣ್ಣದಾಗಿದ್ದರೆ, ಕ್ಷಮೆಯಾಚಿಸಿ ಬದುಕಿಬಿಡಬಹುದಿತ್ತು. ಆದರೇ,,,,, ನಾನು ಮಾಡಿಕೊಂಡದ್ದು ಗಜಗಾತ್ರದ್ದು. ಅತ್ತರಿಲ್ಲ, ಬಿದ್ದರಿಲ್ಲ, ಸತ್ತರೂ ಅರಗಲಾರದಷ್ಟು!!!. ಅಂಟಿಕೊಂಡ ಅತ್ತರಿನ ಹಾಗೆ, ಸಣ್ಣ ಸಣ್ಣ ತಪ್ಪುಗಳು ಮಹಾದಾಕಾರವಾಗಿ ಬೆಳೆದು ಬೆಟ್ಟವಾಗಿದ್ದು ಗೊತ್ತಾಗುವಷ್ಟರಲ್ಲಿ ನನ್ನಾಯಸ್ಸು ಅರ್ಧ ಮುಗಿಯುವ ಹಂತ. ಎದ್ದು ನಡೆಯೋದಾ? ಬಿದ್ದು ಮಣ್ಣಾಗೋದಾ? ಅತ್ತು ಮಗುವಾಗೋದಾ? ಶಿಕ್ಷೆ ಅನುಭವಿಸಿ ಮತ್ತೆ ಹುಟ್ಟೋದಾ?

ಮತ್ತೆ ಮತ್ತೆ ತಪ್ಪಾಗಬಾರದೆಂಬ ಯೋಚನೆ ಮನಸಿಗೆ ಬಂದದ್ದೇ ತಡ. ಹಳೆಯ ಗೀಳಿನ ಗಾಯಗಳನ್ನು ಕೆರೆಯದೇ, ಔಷಧಿ ಹಾಕದೇ, ಮರೆಯಲು ಪ್ರಾರಂಭಿಸಿದ್ದು ಸ್ವಲ್ಪ ವೇಗವಾಯಿತೇನೋ!!!? ನನ್ನ ಮರುಜನ್ಮಕ್ಕೆ ಕಾರಣೀಕರ್ತಳಾದ ನನ್ನವಳಿಗೆ ನಾನೇನು ಮಾಡಿದರೂ ಕಡಿಮೆಯೇ!!!, ಆದರೂ ಮನಸಿನೊಳಗಿನ ಹಳೆಯ ಗಾಯಗಳು ಒಮ್ಮೊಮ್ಮೆ ಬದುಕನ್ನೇ ಬೆತ್ತಲೆ ಮಾಡಿಬಿಡುವಷ್ಟು ಕಾಡುತ್ತದೆ. ನನ್ನ ನಾನು ಸಂಭಾಳಿಸಿಕೊಳ್ಳೋದು ಕೂಡ ಒಂದು ಯಾತನಾಮಯ ಸಾಧನೆ ಆಗಬಹುದೇನೋ!! ಅಂತನಿಸುತ್ತಿದೆ.

ಮಾಡಿರೋ, ಮಾಡ್ಕೊಂಡಿರೋ ತಪ್ಪು ಒಪ್ಪುಗಳಿಗೆ ನಾನು ನ್ಯಾಯ ಒದಗಿಸಲೋಸುಗ, ಒಳ್ಳೆಯ ಯೋಚನೆ ಮಾಡಿದರೂ, ಅದು ಮನಸಿನೊಳಗೆ ಕರಗೋಗೊ ಉಸಿರಾಗುತ್ತಿದೆ. ಏನೇ ಮಾಡಿದರೂ, ಬೃಹದಾಕಾರದ ತಪ್ಪುಗಳಂತೆ ಭಾಸವಾಗುತ್ತಿದೆ. ಸತ್ಯವಂತನಾಗಿ ಬದುಕಲು ಧೈರ್ಯವೊಂದೇ ಸಾಧನವೋ? ನಿರ್ಭಿಡೆ ಬದುಕು ಬೇಕಿದೆಯೋ? ಅರಿಯೆ. ಯಾರನ್ನು ನಂಬಿಸಿ, ಯಾರನ್ನು ಒಪ್ಪಿಸಿ ಬದುಕದಿದ್ದರೂ,, ನನ್ನವಳಿಗೋಸ್ಕರ ಸತ್ಯವಂತನಾಗಬೇಕಿದೆ. ಸತ್ಯದ ಬೆವರು ಹರಿಯಬೇಕಿದೆ. ಸುಳ್ಳಿನ ತ್ಯಾಜ್ಯ ಬೂಧಿಯಾಗಬೇಕಿದೆ.

ಏನೇ ಮಾಡಿದರೂ ಪಾರದರ್ಶಕವಾಗಿ ಮಾಡಬೇಕಿದೆ. ಅಂಗೈಯಗಲ ಬದುಕಿಗೆ ಚಪ್ಪರ ಕಟ್ಟೋದನ್ನ ಬಿಟ್ಟು ಧೂಳಿಡಿಯೋದನ್ನ ತಡೆಯಬೇಕಿದೆ. ತಪ್ಪುಗಳು ಯಾವತ್ತೂ ತಪ್ಪುಗಳೇ,,,, ಅದನ್ನು ಮರೆತು, ಹೊಸ ಸತ್ಯದೊಂದುಗೆ ನಿಜ ಬದುಕನ್ನು ನನ್ನವಳೊಂದಿಗೆ ಸವೆಯಬೇಕಿದೆ. ಬಂಗಾರದ ಹೊಳಪನ್ನು ಬೆವರಿಳಿಸಿ ಹೊರತರಬೇಕಿದೆ.

"ಅಂದುಕೊಂಡದ್ದೆಲ್ಲ ಬದುಕಲ್ಲ,
ಬಯಸಿದ್ದೆಲ್ಲಾ ಬರೋದಿಲ್ಲ,
ಬೇಕಾದ್ದೆಲ್ಲಾ ಮಾಡೋದಲ್ಲ,
ಬಂದದ್ದು ಅನುಭವಿಸೋದೇ ಬಾಳು".

{ನನ್ನ ತಪ್ಪಿಗೆ ನಾನೇ ಜವಾಬ್ದಾರ,
ನನ್ನ ಭವಿಷ್ಯಕ್ಕೂ ನಾನೇ ಸರದಾರ.}
------------------------------------------

No comments:

Post a Comment