Thursday, November 12, 2015

ಈಗಿನ ವಿದ್ಯಾಮಾನಕ್ಕೊಂದು ಬರಹ

"ಮಕ್ಕಳೇ,,,, ನಮ್ಮದು ಜಾತ್ಯಾತೀತ ರಾಷ್ಟ್ರ, ನಾವೆಲ್ಲಾ ಭಾರತಾಂಬೆಯ ಮಕ್ಕಳು. ರಾಮ್-ರಹೀಮ್-ಯೇಸು ಎಲ್ಲರು ಒಂದೇ ಹೇಳಿದ್ದು. ಶಾಂತಿ! ಶಾಂತಿ!! ಶಾಂತಿ!!! ಎಂದು, ನಾವೆಲ್ಲರೂ ಭಾವೈಕ್ಯತೆಯಿಂದ ಬಾಳಬೇಕು. ಎಲ್ಲ ಸಮಾಜದವರನ್ನು ಸಹೋದರ-ಸಹೋದರಿಯರಂತೆ ಕಾಣಬೇಕು. ಎಂದಿಗೂ ಶಾಂತಿಯ ನೆಲೆಗಾಣಬೇಕು."

ಎಷ್ಟು ಚಂದ ಇತ್ತಲ್ವಾ?? ಆ ಬಾಲ್ಯದ ಶಾಲಾಜೀವನದ ಸರಕಾರಿ ಶಿಕ್ಷಕರ ರಸವತ್ತಾದ ಬುದ್ಧಿಮಾತು. ನಾವೆಲ್ಲರೂ ಅಮರ್-ಅಕ್ಬರ್-ಅಂಥೋಣಿ'ಯರೇ ಆಗಿಬಿಡ್ತಿದ್ವಿ!!!
ಈಗೆಲ್ಲಾ ಎಲ್ಲಿ ನೋಡಿದರೂ ಕೇಳಿದರೂ,,,
"ಮಾರ್-ಕಾರ್-ಧೋಣಿ"ಯೇ ಆಗ್ತಿದೆ.

ಹಿಂದು-ಮುಸ್ಲಿಂ-ಕ್ರೈಸ್ತ ಜೊತೆಗೆ ಇನ್ನೂ ಹಲವು ಧರ್ಮಗಳ ಸಂಗಮವೇ ನಮ್ಮೀ ಭಾರತ ಮಾತೆಯ ಒಡಲು-ಮಡಿಲು!!

'ಹಳೆಯದೆಲ್ಲವ ಮರೆತು ಹೊಸದರತ್ತ ನಡೆ,
ಹಳಸಿದ ಹಳೆಯ ದ್ವೇಷಾಗ್ನಿಯ ತಡೆ,
ಹರಡು ಭಾರತಾಂಬೆಯ ನಿಜ ಪ್ರೀತಿಯ ಕೊಡೆ.'

ಅಂವ ಹಿಂದು! ಕೆಟ್ಟ ಹುಳ!! ನಿಮಿಷಕ್ಕೊಂದು ವ್ಯಸನ!!!
ಅಂವ ಮುಸ್ಲಿಂ! ವಿಷ ಸರ್ಪ!! ಅತೀ ಬಣ್ಣದ ಗೋಸುಂಬೆ!!!
ಇಂವ ಕ್ರೈಸ್ತ! ಮೌನ ಮಂಡೂಕ!! ಕಚ್ಚಿದರೂ ಅತೀ ಪ್ರೀತಿ!!!

ಇಂಥವುಗಳೆಲ್ಲಾ ನಾವೇ ಸೃಷ್ಟಿಸಿದ ಸಾಮಾಜಿಕ ಬದುಕಿನ ಕರಿನೆರಳುಗಳು. ಎಲ್ಲವನ್ನು ಸೃಷ್ಟಿ ಮಾಡಿದ್ದು ನಾವೇ ಅಲ್ವಾ? ನಮ್ಮ ಅಜ್ಜಿ-ತಾತ ಮುತ್ತಜ್ಜಿ-ಮುತ್ತಾತರ ಮಾತುಗಳು (ನಮಗದು ಐತಿಹಾಸಿಕ) ಕ್ರೋಧ ತರಿಸುವಂಥದ್ದಾಗಿರಲಿಲ್ಲ. ಬುದ್ಧಿಜೀವಿ ಎನಿಸಿಕೊಂಡ ಹಲವು ವಿಷ ಜಂತುಗಳು(ಎಲ್ಲಾ ಧರ್ಮದಲ್ಲೂ ಇದ್ದಾರೆ!!!) ಮಸಾಲೆ ಅರೆದು ಯುವ ಸಮೂಹಗಳನ್ನು ಬಲಿಪಶು ಮಾಡಿ ತಮ್ಮ ಬೇಳೆ ಬೇಯಿಸಿಕೊಳ್ಳಕ್ಕೆ ಶುರು ಮಾಡಿದ್ರು ನೋಡಿ!!! ಅಲ್ಲಿಂದ ನಮ್ ಭಾರತಾಂಬೆಯ ಮಡಿಲು ರಕ್ತಸಿಕ್ತವಾಗಿದ್ದು.

೨೫-೩೮ರ ಹರೆಯದ ಯೌವ್ವನ-ಗೃಹಸ್ಥಾಯನದಲ್ಲಿರೋ ಎಲ್ಲಾ ಭಾರತೀಯರು ಒಂದೇ ಒಂದು ಸಾರಿ ನಿಮ್ಮ ನಿಮ್ಮ ಪ್ರಾಥಮಿಕ ವಿದ್ಯಾಭ್ಯಾಸಗಳ ದಿನಗಳು, ನಿಮ್ಮೂರಿನ ಸಾಮಾಜಿಕ ಹಾಗೂ ದೇಶವಾಚರಿಸೋ ಹಬ್ಬ ಹರಿದಿನಗಳನ್ನು ನೆನಪಿಸಿಕೊಳ್ಳಿ. ಏನಾದರೂ ವ್ಯತ್ಯಾಸ ಈಗಿನ ಸಮಾರಂಭಗಳಿಗೆ ಕಂಡರೆ ಅದಕ್ಕಿಂತ ಉದಾಹರಣೆ ಬೇಕಿಲ್ಲ ನಾವುಗಳು ಇದ್ದೂ ಸತ್ತಂತೆ ಎಂಬುದು. ಎಲ್ಲವೂ ನಮ್ಮಿಂದಲೇ ಹಾಳಾಗಿದ್ದಂತೂ ಸತ್ಯ.

ಒಬ್ಬನೇ ಭಗತ್ ಸಿಂಗ್ ಹುಟ್ಟಿದ್ದು!
ಒಬ್ಬನೇ ಸುಭಾಷ್ ಚಂದ್ರ ಹುಟ್ಟಿದ್ದು!
ಒಬ್ಬನೇ ಬಿಸ್ಮಿಲ್ಲಾಖಾನ್ ಹುಟ್ಟಿದ್ದು!
ಒಬ್ಬನೇ ಅಬ್ದುಲ್ ಕಲಾಂಹುಟ್ಟಿದ್ದು!

೧೨೬++++ ಕೋಟಿ ಜೀವಂತ ಶವಗಳೇ ಇರೋದು ನಮ್ಮೊಳಗೆ!!! (ನನ್ನನ್ನೂ ಸೇರಿಸಿ)

"ಅಂವ ಹಂದಿ ತಿಂತಾನೆ!
ಇಂವ ದನ ತಿಂತಾನೆ!!"

ಅದ್ಕೆ ನಂಗಾಗಲ್ಲ ಈ ನನ್ಮಕ್ಳನ್ನ ಅಂತ ಬೇರೆ ದೇಶದವರು ನಮ್ಮವರನ್ನ ಹೊಡೆದೋಡಿಸ್ರೋ ನಮ್ ದೇಶದಿಂದ ಅಂತ ಏನಾದ್ರು ಯೋಚಿಸಿದ್ರೇ!!!!!??? ಪರದೇಶದಲ್ಲಿರೋ ನಮ್ಮವರ ಗತಿ!!!???

ಅಲ್ಲರೀ,,,, ತಿನ್ನೋ ಆಹಾರ ಅನಾದಿಕಾಲದಿಂದಲೂ ಆಯಾ ಜಾನಾಂಗ, ಆಯಾ ಸಮಾಜ, ಅವರವರ ಭಾವ ಭಕುತಿಗೆ ಅದರ ಪಾಡಿಗೆ ಅದು ನಡಿತಾಯಿದೆ. ೨೨ನೇ ಶತಮಾನ ಅಲ್ಲ ೨೫ ಶತಮಾನದಲ್ಲೂ ಆಹಾರ ಪದ್ಧತಿ ಅವರವರ ಭಾವಭಕ್ತಿಗೆ ಬಿಟ್ಟಿದ್ದು. ಅದಕ್ಕೂ ಕಲ್ಲು ಬೀಳಿಸಿಕೊಂಡು ಊಟದ ತಟ್ಟೆಗೆ ಮಣ್ಣು ಬೀಳಿಸಿಕೊಳ್ತಿರೋರು ನಾವೇ!!!!

"ಜೈಕಾರ ಹಾಕಿದಂವ ಮಣ್ಣಾದ,
ಹಾಕಿಸ್ಕೊಂಡಂವ ಮಹರಾಜನಾದ!,
ಅನಾಮಧೇಯ ಜನಸಾಮಾನ್ಯ,
ದೇಶದೊಳ್ ಅನಾಥನಾಗೋದ."

ಯಾರೋ ಕರೀತಾರೆ, ಇನ್ಯಾರೋ ಅರಚ್ತಾರೆ, ಅದು ಸರಿ ಇದು ತಪ್ಪು ಅನ್ತಾರೆ. ಬಾ ಹೋಗೋಣ ಹೊಡೆದಾಡಲು ಅಂತಾರೆ. ಕರ್ದೋನು ಜಾಣರ ಜಾಣ ಎಲ್ಲೋ ಮರೆಯಾಗ್ತಾನೆ. ಏನನ್ನೂ ಯೋಚ್ಸದ ಜನಸಾಮಾನ್ಯ ಮಣ್ಣಾಗ್ತಾನೆ. ಇದೆಲ್ಲಾ ನಮಗೆ ನಿಜವಾಗಿಯೂ ಬೇಕಾ?
ಮಣ್ಣಾದವರ ಮನಗೆ ಯಾವನಾದ್ರೂ ಹೋಗಿ ನಿಮ್ಮ ಸಂಸಾರದ ನೊಗ ನಾ ಹಿಡಿತೀನಿ ಅಂತಾನ? ಹಿಡಿದರೂ ೫ವರ್ಷಕ್ಕಿಂತ ಜಾಸ್ತಿ ವರ್ಷ ನೋಡ್ಕೋತಾನ?  ನೋಡ್ಕೊಂಡ್ರೂ ಕಳಕೊಂಡೋರಿಗದು ನೆಮ್ಮದಿಯೇ!!!????

"ಇರುವುದೆಲ್ಲವ ಬಿಟ್ಟು
ಇರದುದೆಡೆಗೆ ತುಡಿವುದೇ
ಜೀವನ. - ಡಿ.ವಿ.ಜಿ."

ಹಾಗಂತ ದೇಶವನ್ನೇ ಅಲ್ಲಾಡಿಸಿ ಅದೇನು ಸಾಧನೆ ಮಾಡಲು ಹೊರಟಿದ್ದೀರೋ ನಾಯಕರೇ!!!!?? ಜೊತೆಗೋಗಿ ಮಣ್ಣಾಗ್ತಿರೋ ನವಯುವಸಮೂಹವೇ!!!???

""ಭಾರತಾಂಬೆಯೆ ಜನಿಸಿ ನಿನ್ನೊಳು ಧನ್ಯನಾದೆನು ತಾಯಿಯೇ""

ಜಯ ಕರುನಾಡು,
ಜಯ ಜಯ ಭಾರತ........

Monday, August 3, 2015

""ಐರಾವತ''"

"ನಾನೆಂಬ ಬಿಳಿ ಆನೆಯ
ಸಾಕೋ ಶುಭ್ರ ಮಾನಸಿ,
ನಾನೆದೆನು ಅತಿ ಭಾರ,
ಸಿಗದು ಬೇಕಾದ ದಿನಸಿ.

ಸಾಕಿದಾ ಒಡತಿಯ ಕ್ಷಮಿಸಲೊಲ್ಲೆ,
ಮದವೇರಿ ಮನಬಂದಂತೆ,
ಬದುಕಿದಾ ಬಿಳಿ ಸಲಗ ನಾ,
ಒಡತಿಯ ಮನಸು ಅರಿಯಲೊಲ್ಲೆ.

ಮಾಡಿದ ಕಾನನ ಬೇಟೆಯಲ್ಲಿ,
ಕಪ್ಪು ಚುಕ್ಕೆಗಳೇ ಎಲ್ಲಾ,
ಬಣ್ಣ ಹಚ್ಚಿದ ಬಿಳಿ ಗಜ
ಎಂದರಿವಾದರೆ ಅದೇ ಸಾರ್ಥಕ್ಯ."

Saturday, July 25, 2015

"ನಿಜ ದೇವತೆ"

"ಪಂಚಭೂತಗಳಲಿ ಲೀನವಾದ್ರೂ ನೀನು,
ಮನಸಿನ ಪ್ರತಿ ಮೂಲೆಗಳಲೂ ಇರುವೆ,
ಉಸಿರಿನಾ ಬಿಸಿಗೆ ನಿನದೇ ನೆನಪಿದೆ,
ಬದುಕಿನಾ ಬಂಡಿಗೆ ನಿನದೇ ಹೆಸರಿದೆ.

ತಾಯಿಯಲ್ಲ ನೀ ನಿಜ ದೇವತೆ,
ನಾನಿರೋದೀಗ ಕಲ್ಲಿನಾ ಸಂತೆ,
ನಾನಿರುವೆನೆಂಬುದೇ ನಾನೀಗ ಮರೆತೆ,
ಬಾಳಿನುದ್ದಕ್ಕೂ ನೀನಿಲ್ಲವೆಂಬುದೇ ಕೊರತೆ."

Friday, July 24, 2015

"ತಾಯಿಕೊಟ್ಟ ಬದುಕು"

"ತಾಯೊಡಲ ಬಯಸಿ ಬಾಯಾರಿ,
ಎದೆಗೂಡು ನೋವಿಂದ ತಂಬೂರಿ,
ನೆನಪಿನ ಬುತ್ತಿಯೊಂದೇ ಜೊತೇರಿ,
ಕಳೆದ ಬೆಳಕು ಮತ್ತೆ ಬರುತ್ತೇನ್ರೀ??

ನೆನ್ನೆಗಳ ಕಲರವಗಳೇ ಕಿವಿಗಿಂಪು,
ನಾಳೆಗಳ ಕನಸುಗಳಿಗೆ ಎದೆ ತಂಪು,
ಜೀವನ ತರಬಹುದೇ ತುಂಬಿದ ಸಂಪು,
ತಾಯಿಕೊಟ್ಟ ಬದುಕೇ ಸದಾಕಂಪು."

Thursday, July 16, 2015

""ಅರಿತ ಕರೆ"

"ಅರಿತರಿವ ಮನಸು ನಿಂದು,
ಹರಿತವಿಹ ಮಾತೂ ನಿಂದೇ,
ಬೆರೆವ ಮನಸಿದ್ದರೇನು ಬಂತು,
ಕರೆವ ಮನಸಿಹ ನೀ ಕರೆವೆ ಎಂತು!

ನಿಂತಲ್ಲೆ ನೀರಾಗೆನು ನಾನು,
ಕುಂತಲ್ಲೇ ಕಲ್ಲಾಗೆನು ನಾನು,
ನೀ ಕರೆವ ಕೂಗಿಗೆ ಕರಗುವೆ ನಾ,
ಇನ್ನಾದರೂ ಕರೆವೊಮ್ಮೆ ನನ್ನನು."

Monday, June 15, 2015

"ಕರುನಾಡಿನ ಒಲವು"

"ಕರುನಾಡೇ,,,,,,,, ಅಗಾಧ ನಿನ್ನ ಪ್ರೀತಿಯ ಕಡಲು,
ಹೇಗೆ ಸಾಧ್ಯವೋ ಅದರ ಆಳ ತಿಳಿಯಲು
ಉಸಿರಿಗೇ ನೀ ಉಸಿರ ಕೊಟ್ಟೆ,
ಬಯಕೆಗೆ ನಿನ ಬದುಕನಿಟ್ಟೆ,
ಬೆಳಕಿಗೆ ನೀ ದೃಷ್ಠಿ ಕೊಟ್ಟೆ ನಾ ಉಸಿರಾಡಲು,
ಅಗಾಧ ಅಗಾಧ ಅಗಾಧ ನಿನ್ನ ಪ್ರೀತಿಯ ಒಡಲು.

ಕೋಪಕೆ ನೀ ನೀರು ಬಿಟ್ಟೆ,
ಹಸಿವಿಗೇ ನೀ ತುತ್ತನಿಟ್ಟೆ,
ಭಯಕೆ ನೀ ಸೆರಗು ಕೊಟ್ಟೆ ನಾ ಎದ್ದೇಳಲು
ಒಲವಿಗೇ ನೀ ಹಾಲು ಕೊಟ್ಟೆ,
ಬಲಕ್ಕೆ ನೀ ನಗುವ ಕೊಟ್ಟೆ,
ಬದುಕಿಗೆ ನೀ ದಾರಿಯಾದೆ ನಾ ಜೀವಿಸಲು.

ವಿಶೇಷ ವಿಶೇಷ ವಿಶೇಷ ನಿನ್ನ ಒಲುಮೆಯಾ ಕಡಲು."

ಕನ್ನಡವೇ ಸತ್ಯಾ!.
ಕರುನಾಡೇ ನಿತ್ಯಾ!!
ಜಯ ಭುವನೇಶ್ವರಿ!!

Monday, June 8, 2015

ರೀತಿ ನೀತಿ

"ನಿನ್ನದೆ ಧ್ಯಾನದಿ ಕಾದಿರುವೆ
ನಿನ್ನೊಳಗೆ ನೀನು ಹೇಗಿರುವೆ?
ಮನದ ಬಾಗಿಲನು ತರೆದಿರುವೆ
ಬಾರದೆ ನೀ ಏಕೆ ಸುಮ್ಮನಿರುವೆ?

ಅರಿತ ಮೇಲಾದರೂ ನನ್ನ ಪ್ರೀತಿಯ,
ಬರಬಾರದೆ ಮಾಡದೆ ಪಜೀತಿಯ?
ಹೇಳು ನೀ ನಿನ್ನ ಪ್ರೀತಿ ರೀತಿಯ
ನಿನಗಾಗಿ ಆವರಿಸಿಕೊಳ್ವೆ  ಪೃಕೃತಿಯ."

Friday, June 5, 2015

ನನ್ನವಳು

"ನನ್ನವಳ ಮುಗುಳುನಗೆ,
ಹಲವು ಹೂಗಳ ಬಗೆ,
ಅವಳ ಹುಸಿ ಮುನಿಸು,
ಕಂದಮ್ಮಗಳ ಅಳುಮೊಗವು.

ನನ್ನವಳು ಉಲಿಯಲು,
ಸಂಗೀತ ಸ್ವರವು ಮೌನ,
ಅವಳ ಕಣ್ಣಂಚಿನ ಹನಿಯು,
ನನ್ನ ಆಯಸ್ಸಿಗೆ ಕನ್ನ. "

Thursday, June 4, 2015

ಮುಸ್ಸಂಜೆ ಮನ

"ಮುಸ್ಸಂಜೆಯ ಕೆಂಪು
ಬಾನಂಚಿನ ಚಿನ್ನದ ಗೆರೆ
ನಿನ್ನ ನಗುವೇನೇ
ನನ್ನೊಲವೇ?

ಮುಸುಕಿದ ಮೋಡದ
ಎದೆಯೊಳಗಿನ ಬಿಸಿ
ಉಸಿರ ಬೇಗೆ ನಿನ್ನದೇ
ಅನ್ನುತ್ತಿದೆ ಮನಸು."

Wednesday, June 3, 2015

ಮಳೆಯ ಲೀಲೆ

"ಮಳೆಯ ಹನಿಯೊಂದು
ಎದೆಯೊಳಗೆ ಬಂದು
ನನ್ನವಳ ಹೆಸರನ್ನು
ಹೇಳಿ ಹಾಡುತಿದೆ.

ಮುಂಗಾರಿನ ಮಿಂಚಂತೆ
ಭೂರಮೆಯ ಹಸಿರಂತೆ
ತಂಗಾಳಿಯ ತಂಪಂತೆ
ಬರುವಳೆಂದು ಹಾಡಿದೆ."

Wednesday, May 27, 2015

"ಮಾನಸ ಮಗು"

"ಮಗುವ ನಗುವ ಕಂಗಳು,
ನೋವಿನ ಮನಕೆ ಬೆಳದಿಂಗಳು,
ಅರಳಿದಾ ಜೀವಕೆ ಬೇಕಿತ್ತು ನಗು,
ನೀ ತಂದೆ ಪ್ರೀತಿಯ ನಗುವ ಮಗು.

ನಿಜ ನಗುವಲ್ಲಿ ಹೊಳೆದಿತ್ತು ಮನ,
ಈಗಂತೂ ಉತ್ಸಾಹದಿಂದ ನಗೋದೇ ಧ್ಯಾನ,
ಬಟ್ಟಲ ಕಂಗಳ ಶುದ್ಧ ಹೊಳಪು,
ಪ್ರೀತಿಯ ಹೃದಯಕೆ ಕಸ್ತೂರಿ ಒನಪು.

ತೂಗುಯ್ಯಾಲೆಯಲಿ ಹಾಡಿತ್ತು ಹೃದಯ,
ನೋವಿನ ಬಾಳಿಗೆ ನಗುವಿನ ವಿದಾಯ,
ಜೊತೆಯಿರೆ ನಿನ್ನ ಪ್ರೀತಿಯ ನಗು,
ನಾನಂತೂ ನಿನ್ನೊಳಗೆ ಮಾನಸ ಮಗು."

ಜೀವ ತುಮುಲ

"ಏಕೋ ಕಾಣೇ,, ಕಣ್ಣೀರು,
ಎದೆ ಮೇಲೂ ತಣ್ಣೀರು,
ಬದುಕಿಗೆಂದು ಪನ್ನೀರು?
ತಿಳಿಯದಾಗಿದೆ ಈ ಮನಕೆ.

ಬಂದಾಯಿತು ಕತ್ತಲೊಳಗೆ,
ಒಂದಾಯಿತು ಸುಖ ದುಃಖ,
ಬರಿದಾಯಿತು ಆಸೆ ಕನಸು,
ಕಾರುನಾಳು ಬಾ ಬೆಳಕೆ.

ಇರುವುದೊಂದೇ ಜೀವನ,
ಜೀವನದ ಜೀವವೂ ಒಂದೇ,
ಕಂಗಳು ಕೂಡ ಮಬ್ಬಲಿ ಬರಿದು,
ಜೀವದ ಜೀವ ನೀ ಒಬ್ಬಳೇ."

ಅಲೆ ಆಲೆ

"ಆಲಿಸಲು ಮನದ ಮಾತು,
ತೇಲಿಬಂತು ನೆಮ್ಮದಿಯ ಹಾಡು.
ಕೇಳಿಸಲು ಆಲಿಸಿದ ಹಾಡು,
ನಗುವಿನ ಅಲೆ ಎದೆಯ ಹೊಕ್ಕಿತು."

ಮನದ ಸ್ವಗತ

"ಮರೆತ ಮನದೊಳಗೆ ಕಗ್ಗತ್ತಲು,
ನೊಂದ ಹೆಗಲಿನಲಿ ಭಯಭೂತ,
ಕುರುಡು ದೃಷ್ಟಿಯೊಳಗೆ ಪಾಪಿಜೀವಿ,
ಜಗದೊಡಲ ಬೇಗೆಗೆ ನನ್ನ ಹೋಲಿಕೆ.

ಬೆಂದಂತ ಜೀವಸತ್ವ ಹಳಸಿದೆ,
ಕರಿದಂಥ ಸಿಹಿಯೂಟ ಒಣಗಿದೆ,
ಹಸಿವಿದ್ದರೂ ಉದರಕ್ಕೀಗ ಅರಿಯದು,
ಕಾಣದಿರೋ ಲೋಕವೀಗ ಹತ್ತಿರ."