Thursday, July 28, 2016

"ಜನ ಮಾನಸ"

"ಕಾವೇರಿದ ಜನ ಮನಸಿಗೆ
ಕಾಳಾಕಿ ಸುಮ್ಮನಿರಿಸಲಾಗದು
ಮದವೇರಿದ ಮನಸುಗಳಿಗೆ
ಮಮತೆಯ ಕೂಗು ಕೇಳಿಸದು.

ಮಣ್ಣಿನ ಮಕ್ಕಳ ಬೇಗೆಯಲ್ಲಿ
ದೊಣ್ಣೆನಾಯಕರ ಹಟವಿದೆ
ಜನಮನಸಿನ ಎದೆಯುರಿಯಲ್ಲಿ
ಜನನಾಯಕರ ಬದುಕಿದೆ.

ಆ ಪಕ್ಷ ಈ ಪಕ್ಷ ಬೇಕಾಗಿಲ್ಲ
ಹೊಟ್ಟೆಗೆ ಅನ್ನ ಬೇಕಿದೆ, ದುಡ್ಡಲ್ಲ
ರೈತಂಗೆ ಹೊಡೆದೋರು ಉಳಿದಿಲ್ಲ
ಋಣ ತೀರಿಸಲು ಇದಕ್ಕಿನ್ನ ದಾರಿಯಿಲ್ಲ."

Tuesday, July 26, 2016

"" ಯೋಧ ""

"ಹೆತ್ತ ಅಮ್ಮ-ಅಮ್ಮಗೆ ಹಸುಕಂದ ನೀನು
ಹೊತ್ತ ಭೂಮಿತಾಯಿಗೆ ಶೂರ ನೀನು,
ಜೊತೆಗಿರ್ಪ ಒಡನಾಡಿಗೆ ಬಂಧು ನೀನು,
ಎದುರಿನಾ ಶತ್ರುಗೆ ಮರಣಮೃದಂಗ ನೀನು.

ಎಲ್ಲಾ ಬಿಟ್ಟ ಸನ್ಯಾಸಿ ನೀನಲ್ಲ
ದೇಶದ ಗಡಿ ಬಿಟ್ರೆ ನಿಂಗಾರಿಲ್ಲ
ಊರ ಕೂಗು ಕೇಳಿ ಕೂಗಿದರೂ
ಎದೆಗೂಡೊಳಗೆ ದೇಶಕಿನ್ನ ಮಿಗಿಲೇನಿಲ್ಲ.

ರಕ್ತ ಚೆಂಡಾಡೋ ನಿನಗಿರಲಿ ಆನೆಬಲ
ಮನೆಮನದನ್ನೆಯ ನೆನಪಿಗಿರಲಿ ಸಹಿಗನಸು,
ನಿನ್ನಾ ಗೆಲುವಿಗೆ ನೀನೇ ರಾಜಕುಮಾರ,
ದೇಶದ ಗತ್ತಿಗೆ ನೀ ನಮ್ಮೂರ ಹಮ್ಮೀರ"

Saturday, July 23, 2016

"ಬಾಳೆಂಬ ಹಬ್ಬದಲ್ಲಿ ಪಾತ್ರ"

ನಾನು ನಾನಾದೆನು ಎಂಬಲ್ಲಿಂದ ನಾನಿಲ್ಲ ಇಲ್ಲಿ ಅನ್ನೋ ಬಾಳಿನ ಪಯಣವಿದು. ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತನೋ? ಅಘೋರ ಶಿಕ್ಷೆಯೋ ಸತ್ಯವಾಗಿಯೂ ನಾನರಿಯೆ. ಸತ್ಯವೆಂಬ ಕಹಿ ವಿಷ ಅರಗಿಸಿಕೊಳ್ಳಲು ಮನಸು ಮಾಗಲೇ ಇಲ್ಲ. ಅಂದುಕೊಂಡ ಬದುಕು ದಕ್ಕಿಸಿಕೊಳ್ಳಲು ಮಾಡದ ಕೆಲಸವಿಲ್ಲ. ಆಡದ ಆಟವಿಲ್ಲ.

ಬದುಕಿನ ಪಯಣದಲ್ಲಿ ನಾನು ಬದುಕಿದ್ದೇನೆ ಎಂಬುದೇ ದೊಡ್ಡ ಸಾಧನೆ. ಏನಾಗಲೀ ಮುಂದೆ ಸಾಗು ನೀ, ನಡೆ ಮುಂದೆ ನಡೆ ಮುಂದೆ ಎಂಬಂತಹ ಮಾತುಗಳು ಮನಸಲ್ಲಿದ್ದರೂ, ನಾನು ಮುನ್ನಡೆಯಲೇ ಇಲ್ಲ. ಎಡತಾಕಿಸಿಕೊಂಡದ್ದು ಮನಸಿನೊಳಗಿನ ಬೇಗೆಯ ಜೊತೆ, ದುಷ್ಟತನವನ್ನು.

ತನ್ನದೇ ತಪ್ಪಿಗೆ ಆಯಸ್ಸು ಪೂರ್ತಿ ಮಾನಸಿಕ ಕ್ಷೋಭೆ ಅನುಭವಿಸಬೇಕಾದ ಸ್ಥಿತಿ ನನ್ನದೀಗ. ಮಾಡಿಕೊಂಡ ಅಮಾನವೀಯ ತಪ್ಪುಗಳಿಗೆ ಶಿಕ್ಷೆ ಮುಗಿಯದು, ನನ್ನ ಬದುಕಿನ್ನುದ್ದಕ್ಕೂ!!.

ಬಾಳಿಗೆ ಬಂದ ನವಜ್ಯೋತಿಯ ನವಿರು ಬೆಳಕಿನ ನಡುವೆಯೂ, ನಾನು ಬೆಳಕು ಕಂಡುಕೊಳ್ಳದೆ ಕತ್ತಲಿನ ಮನಸಿನೊಂದಿಗೆಯೇ ಹೊಂದಾಣಿಕೆ ಮಾಡಿಕೊಂಡೆ. ತಪ್ಪು ಜಗತ್ತಿನ ಒಪ್ಪ ಓರಣಕ್ಕೆ ನನ್ನನ್ನೇ ಮಾರಿಕೊಂಡೆ. ಮುಗ್ಧ ಪ್ರೇಯಸಿಯ ಮಾತೃ ಪ್ರೀತಿಗೆ ಅನರ್ಹನೆಂದು ನನ್ನೊಳಗೆ ನನ್ನ ಕೊಂದುಕೊಂಡೆ.

ಅವರಿವರ ಮಾತು ಕೇಳಿ ಬಂಗಾರದ ಬದುಕನ್ನು ಒದೆಯಬೇಡಿ ಎಂದು ಎಲ್ಲರಿಗೂ ಹೇಳಿ, ನಾನೇ ನನ್ನ ಬಾಳನ್ನು ಹೇಸಿಗೆ ಮಾಡಿಕೊಂಡೆ. ಎಲ್ಲರೊಳಂದಾಗು ಮಂಕುತಿಮ್ಮ ಎಂಬ ಮಾತು, ನನಗೆ ಅತಿಶಯ ಉಕ್ತಿ ಆಗಿದ್ದು ತಪ್ಪಲ್ಲ. ನನ್ನ ಮೊಂಡುತನವೇ ನನ್ನವಳಿಗೆ ಭಯ ಹುಟ್ಟಿಸುವ ವಿಷಯ ಆಗಿದ್ದು ಮತ್ತೊಂದು ಪ್ರಮಾದ.

ಎಲ್ಲರ ನಂಬಿ ಹಾಳಾದೆ ಅನ್ನೋದು ಸತ್ಯವೇ ಆದರೂ, ಸ್ವಂತಿಕೆ ಇಲ್ಲದ ಬುದ್ಧಿ ಇದ್ದರೆಷ್ಟು? ಇಲ್ಲದಿರೆಷ್ಟು. ಮಾಡ್ಕೊಂಡಿರೋ ತಪ್ಪು ಸಣ್ಣದಾಗಿದ್ದರೆ, ಕ್ಷಮೆಯಾಚಿಸಿ ಬದುಕಿಬಿಡಬಹುದಿತ್ತು. ಆದರೇ,,,,, ನಾನು ಮಾಡಿಕೊಂಡದ್ದು ಗಜಗಾತ್ರದ್ದು. ಅತ್ತರಿಲ್ಲ, ಬಿದ್ದರಿಲ್ಲ, ಸತ್ತರೂ ಅರಗಲಾರದಷ್ಟು!!!. ಅಂಟಿಕೊಂಡ ಅತ್ತರಿನ ಹಾಗೆ, ಸಣ್ಣ ಸಣ್ಣ ತಪ್ಪುಗಳು ಮಹಾದಾಕಾರವಾಗಿ ಬೆಳೆದು ಬೆಟ್ಟವಾಗಿದ್ದು ಗೊತ್ತಾಗುವಷ್ಟರಲ್ಲಿ ನನ್ನಾಯಸ್ಸು ಅರ್ಧ ಮುಗಿಯುವ ಹಂತ. ಎದ್ದು ನಡೆಯೋದಾ? ಬಿದ್ದು ಮಣ್ಣಾಗೋದಾ? ಅತ್ತು ಮಗುವಾಗೋದಾ? ಶಿಕ್ಷೆ ಅನುಭವಿಸಿ ಮತ್ತೆ ಹುಟ್ಟೋದಾ?

ಮತ್ತೆ ಮತ್ತೆ ತಪ್ಪಾಗಬಾರದೆಂಬ ಯೋಚನೆ ಮನಸಿಗೆ ಬಂದದ್ದೇ ತಡ. ಹಳೆಯ ಗೀಳಿನ ಗಾಯಗಳನ್ನು ಕೆರೆಯದೇ, ಔಷಧಿ ಹಾಕದೇ, ಮರೆಯಲು ಪ್ರಾರಂಭಿಸಿದ್ದು ಸ್ವಲ್ಪ ವೇಗವಾಯಿತೇನೋ!!!? ನನ್ನ ಮರುಜನ್ಮಕ್ಕೆ ಕಾರಣೀಕರ್ತಳಾದ ನನ್ನವಳಿಗೆ ನಾನೇನು ಮಾಡಿದರೂ ಕಡಿಮೆಯೇ!!!, ಆದರೂ ಮನಸಿನೊಳಗಿನ ಹಳೆಯ ಗಾಯಗಳು ಒಮ್ಮೊಮ್ಮೆ ಬದುಕನ್ನೇ ಬೆತ್ತಲೆ ಮಾಡಿಬಿಡುವಷ್ಟು ಕಾಡುತ್ತದೆ. ನನ್ನ ನಾನು ಸಂಭಾಳಿಸಿಕೊಳ್ಳೋದು ಕೂಡ ಒಂದು ಯಾತನಾಮಯ ಸಾಧನೆ ಆಗಬಹುದೇನೋ!! ಅಂತನಿಸುತ್ತಿದೆ.

ಮಾಡಿರೋ, ಮಾಡ್ಕೊಂಡಿರೋ ತಪ್ಪು ಒಪ್ಪುಗಳಿಗೆ ನಾನು ನ್ಯಾಯ ಒದಗಿಸಲೋಸುಗ, ಒಳ್ಳೆಯ ಯೋಚನೆ ಮಾಡಿದರೂ, ಅದು ಮನಸಿನೊಳಗೆ ಕರಗೋಗೊ ಉಸಿರಾಗುತ್ತಿದೆ. ಏನೇ ಮಾಡಿದರೂ, ಬೃಹದಾಕಾರದ ತಪ್ಪುಗಳಂತೆ ಭಾಸವಾಗುತ್ತಿದೆ. ಸತ್ಯವಂತನಾಗಿ ಬದುಕಲು ಧೈರ್ಯವೊಂದೇ ಸಾಧನವೋ? ನಿರ್ಭಿಡೆ ಬದುಕು ಬೇಕಿದೆಯೋ? ಅರಿಯೆ. ಯಾರನ್ನು ನಂಬಿಸಿ, ಯಾರನ್ನು ಒಪ್ಪಿಸಿ ಬದುಕದಿದ್ದರೂ,, ನನ್ನವಳಿಗೋಸ್ಕರ ಸತ್ಯವಂತನಾಗಬೇಕಿದೆ. ಸತ್ಯದ ಬೆವರು ಹರಿಯಬೇಕಿದೆ. ಸುಳ್ಳಿನ ತ್ಯಾಜ್ಯ ಬೂಧಿಯಾಗಬೇಕಿದೆ.

ಏನೇ ಮಾಡಿದರೂ ಪಾರದರ್ಶಕವಾಗಿ ಮಾಡಬೇಕಿದೆ. ಅಂಗೈಯಗಲ ಬದುಕಿಗೆ ಚಪ್ಪರ ಕಟ್ಟೋದನ್ನ ಬಿಟ್ಟು ಧೂಳಿಡಿಯೋದನ್ನ ತಡೆಯಬೇಕಿದೆ. ತಪ್ಪುಗಳು ಯಾವತ್ತೂ ತಪ್ಪುಗಳೇ,,,, ಅದನ್ನು ಮರೆತು, ಹೊಸ ಸತ್ಯದೊಂದುಗೆ ನಿಜ ಬದುಕನ್ನು ನನ್ನವಳೊಂದಿಗೆ ಸವೆಯಬೇಕಿದೆ. ಬಂಗಾರದ ಹೊಳಪನ್ನು ಬೆವರಿಳಿಸಿ ಹೊರತರಬೇಕಿದೆ.

"ಅಂದುಕೊಂಡದ್ದೆಲ್ಲ ಬದುಕಲ್ಲ,
ಬಯಸಿದ್ದೆಲ್ಲಾ ಬರೋದಿಲ್ಲ,
ಬೇಕಾದ್ದೆಲ್ಲಾ ಮಾಡೋದಲ್ಲ,
ಬಂದದ್ದು ಅನುಭವಿಸೋದೇ ಬಾಳು".

{ನನ್ನ ತಪ್ಪಿಗೆ ನಾನೇ ಜವಾಬ್ದಾರ,
ನನ್ನ ಭವಿಷ್ಯಕ್ಕೂ ನಾನೇ ಸರದಾರ.}
------------------------------------------

Friday, July 22, 2016

"ನಮ್ಮೊಳಗಿನ ನಮಗೊಂದು ಪತ್ರ"

ಆತ್ಮೀಯ ನಗರದ ಅತ್ಯುನ್ನತ ಸರ್ಕಾರಿ ಅಧಿಕಾರಿಗಳೇ(ಕಾರ್ಯಾಂಗ/ನ್ಯಾಯಾಂಗ/ಶಾಸಕಾಂಗ), ದೊಡ್ಡೋರನಿಸಿಕೊಂಡೋರ ಚಮಚ ಚೇಲಾಗಳೇ, ಆರಕ್ಷಕ ಅಧಿಕಾರಗಳೇ (ನಾಗರೀಕ/ಸಂಚಾರ), ಸಕಲ ಸೇವಾ ಸಿಬ್ಬಂಧಿಗಳೇ,  ಹಾಗೂ ನೆಲ್ಮೆಯ ಸತ್ತಂತಿರೋ ಸತ್ಪ್ರಜೆಗಳೇ,

೧. ಶುಕ್ರವಾರ ಬಂತೆಂದರೆ, ನಾಗರೀಕ ಸಮುದಾಯಕ್ಕೆ ನಗರದೊಳಗೆ ವಾಹನ ಚಾಲಾಯಿಸಲು(೧೨-೫) ಒಂಥರಾ ಸಂಕಟ ಶುರುವಾಗುತ್ತೆ. ೬೦%-೮೦% ಮುಸಲ್ಮಾನ ಸೋದರರು ಮೂರ್ಮೂರು ಜನ ಸವಾರಿ ಮಾಡ್ತಾ, ಶಿರಸ್ತ್ರಾಣ ಕೂಡ ಹಾಕೊಳ್ಳದೆ ವಿಪರೀತ ವೇಗವಾಗಿ ಓಡಾಡ್ತಾರೆ‌. ಪ್ರಶ್ನಿಸಲು ಹೋದರೆ ನಮಗೇ ತಿರುಗಿ ಪ್ರಶ್ನಿಸ್ತಾರೆ‌. ಇದು ಖಂಡಿತ ಒಳ್ಳೆಯ ಸಮಾಜ ಸೃಷ್ಟಿಗಲ್ಲ. ಜನಸಾಮಾನ್ಯರ ತಾಳ್ಮೆ ಪರೀಕ್ಷೆ ಜಾಸ್ತಿಯಾದರೆ, ಒಂದಲ್ಲ ಒಂದು ದಿನ, ನಮ್ಮ ಬೆಂಗಳೂರು ಇರಾಕ್/ಇರಾನ್/ಟರ್ಕಿ/ಪಾಕ್ ಆಗೋದ್ರಲ್ಲಿ ಸಂಶಯವಿಲ್ಲ‌.

೨. ಕಾಲೇಜು(ಕೆಲವೊಮ್ಮೆ ಪ್ರೌಢಶಾಲೆ) ವಿದ್ಯಾರ್ಥಿಗಳು ಕೂಡ ವಿಪರೀತ ಆಡ್ತಾರೆ. ಕೇಳಿದ್ರೆ, ನಮ್ ಸ್ಟೂಡೆಂಟ್ ಪವರ್, ಅದು ಇದು ಅಂತ ವರಾತ ಮಾಡ್ತಾರೆ‌. ಒಂದೋ ಇದಕ್ಕೆಲ್ಲಾ ಕಡಿವಾಣ ಸರಿಯಾದ ರೀತಿಯಲ್ಲಿ ಹಾಕಿ‌, ಅಥವಾ ನಾವೇನು ಮಾಡ್ಬೇಕೆಂದು ತಿಳಿಸಿ‌. ಇಲ್ಲಾಂದ್ರೆ ಜನಸಾಮಾನ್ಯ ಮೃಗವಾಗೋ ದಿನ ದೂರವಿಲ್ಲ.

೩. ನಮ್ ಬೆಂಗಳೂರ ಶಾಲಾವಾಹನಗಳ ಚಾಲಕರಿಗೆ ಅವರು ದೇವಲೋಕದ ಸಾರಥಿಗಳಲ್ಲ, ಅಥವಾ ದೇವಲೋಕದಲ್ಲಿ ವಾಹನ ಚಲಾಯಿಸ್ತಾಯಿಲ್ಲ ಅನ್ನೋದನ್ನ ಅರ್ಥ ಮಾಡಿಸಿ‌. ಇಲ್ಲಾಂದ್ರೆ ಮುಂದೆ, ನರಕಸದೃಶವಾಗಿ ಅನುಭವಿಸ್ತಾರೆ.

೪. ಇನ್ನು ದೊಡ್ಡ ತಲೆನೋವಂದ್ರೆ, ನಗರ ವಲಯದಲ್ಲಿ ನೀರು ಸರಬರಾಜು ಮಾಡೋ ಚಾಲಕರು(ಕೆಲವೊಮ್ಮೆ ಟ್ರಾಕ್ಟರ್ ಸಹ), ಖಾಸಗಿ ಪ್ರಯಾಣ ವಾಹನದ ಚಾಲಕರು, ರಸ್ತೆಗೆ ಅವರೇ ಒಡಯರೇನೋ ಎಂಬಂತೆ ಆಟ ಆಡ್ತಾರೆ. ಇದೆಲ್ಲಾ ನಮ್ ಬೆಂಗಳೂರಿನ ಅಂದ, ಒಳ್ಳೆತನದ ದುರುಪಯೋಗ ಮಾಡೋ ಛಾಳಿ ಎಂದರೆ ತಪ್ಪಲ್ಲ.

೫. ದೊಡ್ಡೋರು ಅನಿಸಿಕೊಂಡ ಜನನಾಯಕ/ಜನಪ್ರತಿನಿಧಿ/ಉದ್ಯಮಿ/ಐಟಿ-ಬಿಟಿ-ಸೋಡಾ ಚೀಟಿ ಐಕಾನ್ಸ್/ತಮ್ಮ ದೊಡ್ಡದೆನಿಸಿದ ಕಾರುಗಳನ್ನ ದಯಮಾಡಿ ನಗರವಲಯದಲ್ಲಿ ಕಡಿಮೆ ವೇಗದಲ್ಲಿ ಚಾಲಿಸಿ, ಅಕಸ್ಮಾತ್, ಯಾರಾದ್ರು ಹಿಂದಿನಿಂದ ದಾರಿಕೇಳಿದರೆ ದಾರಿಕೊಟ್ಟು ದೊಡ್ಡೋರಾಗಿ, ಮಳೆಗಾಲದಲ್ಲಿ ದ್ವಿಚಕ್ಕವಾಹನ ಸವಾರರಿಗೆ ದಾರಿಮಾಡಿಕೊಡಿ‌‌ ನಿಮ್ಮ ಗಂಟೇನು ಹೋಗಲ್ಲ. ನಗರದೊಳಗೆ ಪ್ರಜ್ವಲಿಸೊ ದೀಪ ಪ್ರದರ್ಶನ ಬೇಡ.

೬. ನಿಮ್ಮ ಹಿಂದೆ ತುರ್ತುವಾಹನ(ಆ್ಯಂಬುಲೆನ್ಸ್) ಇದ್ದರೆ, ಶಬ್ಧ ಮಾಡಿ ಮುಂದಿರೋ ವಾಹನ ಚಾಲಕನ ಗಮನಸೆಳೆದು ನೀವೂ ದಾರಿ ಮಾಡಿಕೊಡಿ‌. ಬದಲಾಗಿ, ವಾವ್ ಆ್ಯಂಬುಲೆನ್ಸ್ ಬಂತು, ಟ್ರಾಫಿಕ್ ಕ್ಲೀಯರ್ ಆಗುತ್ತೆ ಅನ್ನೋ ಮೃಗೀಯ ವರ್ತನೆ  ಮಾಡಬೇಡಿ.

೭. ಮಹಾನಗರದ ಮಹಾ ಮಾತೃಪಿತೃ ದೇವರುಗಳೇ,
ನಿಮ್ಮ ಮಕ್ಕಳಿಂದ ಅಕ್ಕಪಕ್ಕದ ಮನೆಮಕ್ಕಳು ಏನಾದರು ಸಮಾಜಮುಖಿ ಬೆಳವಣಿಗೆ ಕಲಿಯೋಹಾಗೆ ಬೆಳೆಸಿ, ಅವರು ಕೇಳಿದಕ್ಕೆಲ್ಲಾ ಹಣವಿದೆ, ಇರೋ ಒಬ್ಬ ಮಗ/ಳು ಅಂತ ಎಲ್ಲಾ ಮಾಡಿ, ಆಮೇಲೆ ಸರ್ಕಾರ/ಸವಲತ್ತಿನ ಬಗ್ಗೆ ಶಾಪ‌ ಹಾಕೋದನ್ನು ಬಿಡಿ‌.

ಕೊನೆಯದಾಗಿ,
ನಿಮ್ಮ ಊರಿದು. ನೀವೇ ಇಲ್ಲಿ ಸಾರ್ಬಭೌಮರು. ಇತರರಿಗೆ ಆದರ್ಶಪ್ರಾಯರಾಗಿ. ಶಾಪಗ್ರಸ್ತರಾಗದಿರಿ.
ಕರುನಾಡ ಮಡಿಲಲ್ಲಿ ಕನ್ನಡ ಕಲಿತು, ಕನ್ನಡ ಮಾತಾಡಿ, ಕನ್ನಡ ಕಲಿಸಿ, ನಾವು ಈ ಮಣ್ಣಿನ ಋಣ ತೀರಿಸುವತ್ತ ಬದುಕೋಣ, ಬೆಳೆಯೋಣ, ಇಂದಿನ ಇದೇ ಭೂತಾಯಿ ಒಡಲಲ್ಲಿ ಮಣ್ಣಾಗೋಣ.

ಜೈ ಭಾರತಾಂಬೆ,
ಜಯ ಜಯ ಕರುನಾಡು.

Monday, July 18, 2016

'ಇದೇ ನಾಡು - ಇದೇ ಭಾರತ'

"ಮಕ್ಕಳೇ,,,, ನಮ್ಮದು ಜಾತ್ಯಾತೀತ ರಾಷ್ಟ್ರ, ನಾವೆಲ್ಲಾ ಭಾರತಾಂಬೆಯ ಮಕ್ಕಳು. ರಾಮ್-ರಹೀಮ್-ಯೇಸು ಎಲ್ಲರು ಒಂದೇ ಹೇಳಿದ್ದು. ಶಾಂತಿ! ಶಾಂತಿ!! ಶಾಂತಿ!!! ಎಂದು, ನಾವೆಲ್ಲರೂ ಭಾವೈಕ್ಯತೆಯಿಂದ ಬಾಳಬೇಕು. ಎಲ್ಲ ಸಮಾಜದವರನ್ನು ಸಹೋದರ-ಸಹೋದರಿಯರಂತೆ ಕಾಣಬೇಕು. ಎಂದಿಗೂ ಶಾಂತಿಯ ನೆಲೆಗಾಣಬೇಕು."

ಎಷ್ಟು ಚಂದ ಇತ್ತಲ್ವಾ?? ಆ ಬಾಲ್ಯದ ಶಾಲಾಜೀವನದ ಸರಕಾರಿ ಶಿಕ್ಷಕರ ರಸವತ್ತಾದ ಬುದ್ಧಿಮಾತು. ನಾವೆಲ್ಲರೂ ಅಮರ್-ಅಕ್ಬರ್-ಅಂಥೋಣಿ'ಯರೇ ಆಗಿಬಿಡ್ತಿದ್ವಿ!!!
ಈಗೆಲ್ಲಾ ಎಲ್ಲಿ ನೋಡಿದರೂ ಕೇಳಿದರೂ,,,
"ಮಾರ್-ಕಾರ್-ಧೋಣಿ"ಯೇ ಆಗ್ತಿದೆ.

ಹಿಂದು-ಮುಸ್ಲಿಂ-ಕ್ರೈಸ್ತ ಜೊತೆಗೆ ಇನ್ನೂ ಹಲವು ಧರ್ಮಗಳ ಸಂಗಮವೇ ನಮ್ಮೀ ಭಾರತ ಮಾತೆಯ ಒಡಲು-ಮಡಿಲು!!

'ಹಳೆಯದೆಲ್ಲವ ಮರೆತು ಹೊಸದರತ್ತ ನಡೆ,
ಹಳಸಿದ ಹಳೆಯ ದ್ವೇಷಾಗ್ನಿಯ ತಡೆ,
ಹರಡು ಭಾರತಾಂಬೆಯ ನಿಜ ಪ್ರೀತಿಯ ಕೊಡೆ.'

ಅಂವ ಹಿಂದು! ಕೆಟ್ಟ ಹುಳ!! ನಿಮಿಷಕ್ಕೊಂದು ವ್ಯಸನ!!!
ಅಂವ ಮುಸ್ಲಿಂ! ವಿಷ ಸರ್ಪ!! ಅತೀ ಬಣ್ಣದ ಗೋಸುಂಬೆ!!!
ಇಂವ ಕ್ರೈಸ್ತ! ಮೌನ ಮಂಡೂಕ!! ಕಚ್ಚಿದರೂ ಅತೀ ಪ್ರೀತಿ!!!

ಇಂಥವುಗಳೆಲ್ಲಾ ನಾವೇ ಸೃಷ್ಟಿಸಿದ ಸಾಮಾಜಿಕ ಬದುಕಿನ ಕರಿನೆರಳುಗಳು. ಎಲ್ಲವನ್ನು ಸೃಷ್ಟಿ ಮಾಡಿದ್ದು ನಾವೇ ಅಲ್ವಾ? ನಮ್ಮ ಅಜ್ಜಿ-ತಾತ ಮುತ್ತಜ್ಜಿ-ಮುತ್ತಾತರ ಮಾತುಗಳು (ನಮಗದು ಐತಿಹಾಸಿಕ) ಕ್ರೋಧ ತರಿಸುವಂಥದ್ದಾಗಿರಲಿಲ್ಲ. ಬುದ್ಧಿಜೀವಿ ಎನಿಸಿಕೊಂಡ ಹಲವು ವಿಷ ಜಂತುಗಳು(ಎಲ್ಲಾ ಧರ್ಮದಲ್ಲೂ ಇದ್ದಾರೆ!!!) ಮಸಾಲೆ ಅರೆದು ಯುವ ಸಮೂಹಗಳನ್ನು ಬಲಿಪಶು ಮಾಡಿ ತಮ್ಮ ಬೇಳೆ ಬೇಯಿಸಿಕೊಳ್ಳಕ್ಕೆ ಶುರು ಮಾಡಿದ್ರು ನೋಡಿ!!! ಅಲ್ಲಿಂದ ನಮ್ ಭಾರತಾಂಬೆಯ ಮಡಿಲು ರಕ್ತಸಿಕ್ತವಾಗಿದ್ದು.

೨೫-೩೮ರ ಹರೆಯದ ಯೌವ್ವನ-ಗೃಹಸ್ಥಾಯನದಲ್ಲಿರೋ ಎಲ್ಲಾ ಭಾರತೀಯರು ಒಂದೇ ಒಂದು ಸಾರಿ ನಿಮ್ಮ ನಿಮ್ಮ ಪ್ರಾಥಮಿಕ ವಿದ್ಯಾಭ್ಯಾಸಗಳ ದಿನಗಳು, ನಿಮ್ಮೂರಿನ ಸಾಮಾಜಿಕ ಹಾಗೂ ದೇಶವಾಚರಿಸೋ ಹಬ್ಬ ಹರಿದಿನಗಳನ್ನು ನೆನಪಿಸಿಕೊಳ್ಳಿ. ಏನಾದರೂ ವ್ಯತ್ಯಾಸ ಈಗಿನ ಸಮಾರಂಭಗಳಿಗೆ ಕಂಡರೆ ಅದಕ್ಕಿಂತ ಉದಾಹರಣೆ ಬೇಕಿಲ್ಲ ನಾವುಗಳು ಇದ್ದೂ ಸತ್ತಂತೆ ಎಂಬುದು. ಎಲ್ಲವೂ ನಮ್ಮಿಂದಲೇ ಹಾಳಾಗಿದ್ದಂತೂ ಸತ್ಯ.

ಒಬ್ಬನೇ ಭಗತ್ ಸಿಂಗ್ ಹುಟ್ಟಿದ್ದು!
ಒಬ್ಬನೇ ಸುಭಾಷ್ ಚಂದ್ರ ಹುಟ್ಟಿದ್ದು!
ಒಬ್ಬನೇ ಬಿಸ್ಮಿಲ್ಲಾಖಾನ್ ಹುಟ್ಟಿದ್ದು!
ಒಬ್ಬನೇ ಅಬ್ದುಲ್ ಕಲಾಂಹುಟ್ಟಿದ್ದು!

೧೨೬++++ ಕೋಟಿ ಜೀವಂತ ಶವಗಳೇ ಇರೋದು ನಮ್ಮೊಳಗೆ!!! (ನನ್ನನ್ನೂ ಸೇರಿಸಿ)

"ಅಂವ ಹಂದಿ ತಿಂತಾನೆ!
ಇಂವ ದನ ತಿಂತಾನೆ!!"

ಅದ್ಕೆ ನಂಗಾಗಲ್ಲ ಈ ನನ್ಮಕ್ಳನ್ನ ಅಂತ ಬೇರೆ ದೇಶದವರು ನಮ್ಮವರನ್ನ ಹೊಡೆದೋಡಿಸ್ರೋ ನಮ್ ದೇಶದಿಂದ ಅಂತ ಏನಾದ್ರು ಯೋಚಿಸಿದ್ರೇ!!!!!??? ಪರದೇಶದಲ್ಲಿರೋ ನಮ್ಮವರ ಗತಿ!!!???

ಅಲ್ಲರೀ,,,, ತಿನ್ನೋ ಆಹಾರ ಅನಾದಿಕಾಲದಿಂದಲೂ ಆಯಾ ಜಾನಾಂಗ, ಆಯಾ ಸಮಾಜ, ಅವರವರ ಭಾವ ಭಕುತಿಗೆ ಅದರ ಪಾಡಿಗೆ ಅದು ನಡಿತಾಯಿದೆ. ೨೨ನೇ ಶತಮಾನ ಅಲ್ಲ ೨೫ ಶತಮಾನದಲ್ಲೂ ಆಹಾರ ಪದ್ಧತಿ ಅವರವರ ಭಾವಭಕ್ತಿಗೆ ಬಿಟ್ಟಿದ್ದು. ಅದಕ್ಕೂ ಕಲ್ಲು ಬೀಳಿಸಿಕೊಂಡು ಊಟದ ತಟ್ಟೆಗೆ ಮಣ್ಣು ಬೀಳಿಸಿಕೊಳ್ತಿರೋರು ನಾವೇ!!!!

"ಜೈಕಾರ ಹಾಕಿದಂವ ಮಣ್ಣಾದ,
ಹಾಕಿಸ್ಕೊಂಡಂವ ಮಹರಾಜನಾದ!,
ಅನಾಮಧೇಯ ಜನಸಾಮಾನ್ಯ,
ದೇಶದೊಳ್ ಅನಾಥನಾಗೋದ."

ಯಾರೋ ಕರೀತಾರೆ, ಇನ್ಯಾರೋ ಅರಚ್ತಾರೆ, ಅದು ಸರಿ ಇದು ತಪ್ಪು ಅನ್ತಾರೆ. ಬಾ ಹೋಗೋಣ ಹೊಡೆದಾಡಲು ಅಂತಾರೆ. ಕರ್ದೋನು ಜಾಣರ ಜಾಣ ಎಲ್ಲೋ ಮರೆಯಾಗ್ತಾನೆ. ಏನನ್ನೂ ಯೋಚ್ಸದ ಜನಸಾಮಾನ್ಯ ಮಣ್ಣಾಗ್ತಾನೆ. ಇದೆಲ್ಲಾ ನಮಗೆ ನಿಜವಾಗಿಯೂ ಬೇಕಾ?
ಮಣ್ಣಾದವರ ಮನಗೆ ಯಾವನಾದ್ರೂ ಹೋಗಿ ನಿಮ್ಮ ಸಂಸಾರದ ನೊಗ ನಾ ಹಿಡಿತೀನಿ ಅಂತಾನ? ಹಿಡಿದರೂ ೫ವರ್ಷಕ್ಕಿಂತ ಜಾಸ್ತಿ ವರ್ಷ ನೋಡ್ಕೋತಾನ?  ನೋಡ್ಕೊಂಡ್ರೂ ಕಳಕೊಂಡೋರಿಗದು ನೆಮ್ಮದಿಯೇ!!!????

"ಇರುವುದೆಲ್ಲವ ಬಿಟ್ಟು
ಇರದುದೆಡೆಗೆ ತುಡಿವುದೇ
ಜೀವನ. - ಡಿ.ವಿ.ಜಿ."

ಹಾಗಂತ ದೇಶವನ್ನೇ ಅಲ್ಲಾಡಿಸಿ ಅದೇನು ಸಾಧನೆ ಮಾಡಲು ಹೊರಟಿದ್ದೀರೋ ನಾಯಕರೇ!!!!?? ಜೊತೆಗೋಗಿ ಮಣ್ಣಾಗ್ತಿರೋ ನವಯುವಸಮೂಹವೇ!!!???

ಸೇನೆಯಾಗಲಿ, ಆರಕ್ಷಕರಾಗಲಿ ದುಡಿವ ಜೀವ ದುಡಿದರೂ ನೆಮ್ಮದಿಯಿಲ್ಲ, ಸತ್ತರೂ ನೆಮ್ಮದಿಯಿಲ್ಲ. ನಮ್ಮತನದ ಗೋರಿಯೊಳಗೆ ಬೆಚ್ಚಗೆ ಮಲಗೋಣ ಅಂದರೆ ಅದಕ್ಕೂ ಅವಕಾಶವಿಲ್ಲದ ಹುಚ್ಚುಕಾನೂನು! ಬಡವ ಬಡವನಾಗಿ ಹುಟ್ಟೋದು ತಪ್ಪಲ್ಲ, ಬಡವನಾಗಿ ಸಾಯೋದು ತಪ್ಪು ಅಂತ ತಿಳ್ಕೊಂಡ ಅತಿ ಬುದ್ಧಿವಂತರು ಅಪರಾಧ ಲೋಕದೊಳಗೆ ಶ್ರೀಮಂತ ಶವವಾಗ್ತಿದಾರೆ!!. ವಿದ್ಯೆಯಿದ್ದೋನು ಬುದ್ಧಿ ಕಳ್ಳೋತಿದ್ದಾನೆ‌. ಬುದ್ಧಿಯಿರೋನು ವಿವೇಕ ಮರೀತಿದ್ದಾನೆ. ವಿದ್ಯೆ-ಬುದ್ದಿ ಎರಡೂ ಇರೋನು ದೇಶದ ಹೊರಗೆ ಹೋಗಿ ಜೀವನ ಹುಡ್ಕೋತಿದಾನೆ.
ಎಲ್ಲಾ ತಿಳಿದ್ಕೊಂಡು, ಕಾರ್ಯಾಂಗ-ನ್ಯಾಯಾಂಗ ಅಂತ ಅರಚಾಡೋರು, ಧರ್ಮ-ಜಾತಿ-ಮತ ಅಂತ ಕಳ್ದೋಗ್ತಿದಾರೆ.

ಆದ್ರೂ ನನ್ನೀ ಭಾರತಾಂಬೆ ಮೌನಗೌರಿಯಾಗಿ ಇದ್ದವರ-ಇಲ್ಲದವರ ಸಮಾನವಾಗಿ ಪೋಷಿಸ್ತಾ ತಾನು ಮಣ್ಣೊಳಗೆ ಮಣ್ಣಾಗಿ ಹೈರಾಣಾಗಿದ್ದಾಳೆ.

""ಭಾರತಾಂಬೆಯೆ ಜನಿಸಿ ನಿನ್ನೊಳು ಧನ್ಯನಾದೆನು ತಾಯಿಯೇ""

ಜಯ ಕರುನಾಡು,
ಜಯ ಜಯ ಭಾರತ........