Thursday, October 31, 2019

ಬಂತು ಬಂತು ನವೆಂಬರ್ ಒಂದು

ಬಂತು ಬಂತು ನವೆಂಬರ್ ಒಂದು
ನಮ್ಮ ಕನ್ನಡಮ್ಮನ ಹಬ್ಬವಿಂದು
ಇಂದಾದರೂ ನಾವಿಲ್ಲಿ ಒಂದು
ಎಂದೆನ್ನುತ ಲೋಕಕೆ ಸಾರೋಣವಿಂದು

ಹಿರಿಯರು ಕಟ್ಟಿದ ಈ ನಾಡು,
ಹಲವಾರು ವಿಶೇಷಗಳ ನೆಲೆವೀಡು,
ಏನಿಲ್ಲ ಎಂದು ಕೇಳುವ ಹಾಗೆ ಇಲ್ಲ
ಬೇಕೆಂಬುದೆಲ್ಲಾ ಇಲ್ಲಿ ಸಿಗದೇನಿಲ್ಲ

ಕನ್ನಡ ಎಂದರೆ ಕರುನಾಡ ಉಸಿರು
ಕರುನಾಡ ಮಕ್ಕಳಿಗೆ ಈ ಮಣ್ಣೇ ಉಸಿರು
ತಾಯೆಂದರೆ ಹೆತ್ತವಳು ಮಾತ್ರವಲ್ಲ
ಹೊತ್ತವಳ ತಾಯೆನ್ನಲು ಬಿಂಕ ಬೇಕಿಲ್ಲ.

ಕರುನಾಡೊಳಗೆ ಕನ್ನಡ ತಾಯಿಗೆ
ಆ ತಾಯಿಗೆ, ಕೊಡವ, ತುಳು, ಕೊಂಕಣಿ
ಹಲವು ಸೋದರಿಯರ ಬಾಂಧವ್ಯ.
ಸೋದರ ಮಕ್ಕಳಲ್ಲಿ ರಾಜಕೀಯದ ವೈಷಮ್ಯ.

ತೆಂಕಣದ ಬೀದರಿಂದ ಹಿಡಿದು ಬಡಗಣದ
ಚಾಮರಾಜನಗರ ತನಕ, ಮೂಡಣದ ಕೋಲಾರದಿಂದ
ಪಡುವಣದ ಗೋಕರ್ಣದ ತನಕ,
ಏನಿಲ್ಲ? ಏನೇನಿಲ್ಲ? ಬಲ್ಲವರು ಉಂಟೇನು?

ಕಾಲನ ಕೈಯಲ್ಲಿ ಕರುನಾಡು ಕೈಗೊಂಬೆ
ಕೈಯೊಳಗೆ ಮಣ್ಣಿನ ಮಕ್ಕಳು ಗೋಸುಂಬೆ
ಬೆಳೆವರು ತಿನ್ನುವರು ತರಾವರಿ ದಾಳಿಂಬೆ!!
ಆದರೂ ಅರ್ಥ ಮಾಡಿಕೊಳ್ಳದವರಿಗೆ ಏನೆಂಬೆ?

ಇಂದಲ್ಲ ನಾಳೆ, ಅಲ್ಲದಿದ್ದರೂ ಮುಂದೆ,
ನಗುವ ತಾಯಾಗಲಿ  ನಮ್ಮ ಕನ್ನಡಾಂಬೆ.
ಮನುಜ ಮತ ವಿಶ್ವಪಥ ಎನ್ನೋ ಮಾತು
ಇನ್ನಾದರೂ ಜಾರಿಯಾಗಲಿ ಕರುನಾಡ ಒಳಗೆ.

Tuesday, September 25, 2018

ಅರಿಯುವನೇ ಮನುಜ!!?

'ನಾಗೇಶ್ವರನ ನಂಬುವರು
ಅವನ ಕೊರಳಲ್ಲಿರೋ ಹಾವನ್ನಲ್ಲ!!!
ಮೂಷಿಕವಾಹನನ ನಂಬುವರು.
ಅವನ ವಾಹನ ಮೂಷಿಕವನ್ನಲ್ಲ!!!.

ಶನೇಶ್ವರಗೆ ಹೆದರಿ ಕೈಮುಗಿವೆವು
ಅವನ ವಾಹನ ಕಾಗೆಯನ್ನಲ್ಲ!!!
ಶ್ರೀಹರಿಗೆ ಕರ ಮುಗಿವೆವು
ಅವನೇ ಅವತರಿಸಿದ ಹಂದಿಯನ್ನಲ್ಲ!!!

ಏನಿದ್ದರೂ ಕಡಿಮೆಯೇ!!
ಎನಿತಿದ್ದರೂ ರೋಧನೆಯೇ!!
ಈ ನರಮನ್ಸನ ಜೀವನದಲಿ
ಇವನಿಗೊಪ್ಪುವ ವಿಷಯ ಇಲ್ಲಿಲ್ಲ ಜೋಕೇ!!!'

Monday, April 16, 2018

'ವರುಣನಿಗೊಂದು ಮನವಿ'

ಹೇ ವರುಣನೇ,,
ರವಿಯ ಉರಿಯನ್ನು ಲೆಕ್ಕಿಸದೆ
ಅವನ ಕಿರಣದೊಳಗೆ ಒಂದು
ಮುತ್ತು ಧರಿಸಿರುವೆ.

ಮನುಜನ ಕಾಮ
ದಾಹವ ಮೀಟಿ
ಮನುಜಮತಕ್ಕೆ ತಂಪೀಯಲಾರೆಯ?
ಕಾಮದ ಬೆಂಕಿಯ ದಮನಿಸಲಾರೆಯ?

ಸರ್ವ ಜೀವಕೆ ನೀನು ಬೇಕು
ರವಿಯ ಕಿರಣವೂ ಬೇಕು.
ಅತಿಯಾದ ಬೇಗುದಿಗೆ
ಬೇಲಿ ಹಾಕಲಾರೆಯ?

ಉರಿವ ಮನದೊಳಗಣ ಬೆಂಕಿಗೆ
ನೀತಾನೆ ಏನು ಮಾಡುವೆ?
ಕಾಮಿಸಿ ಕೊಲ್ಲುವ ಮನುಜನ
ಮನವ ನೀ ಹೇಗೆ ದಮನಿಸುವೆ?

ಅಸಹಾಯಕ ಹೆಣ್ಮನಸ್ಸುಗಳ
ಕಂಬನಿ ನೀ ತೊಡೆಯುವೆಯಾ?
ಒಡೆದ ಮನಸುಗಳ ಒಗ್ಗಟ್ಟಿಗೆ
ನೀ ಸೇತುವೆ ಆಗುವೆಯಾ?

ಕಳಕೊಂಡ ಜೀವ ಬೇನೆಗೆ
ಹೆತ್ತೊಡಲ ಖಾಲಿ ಬಿಡುವೆಯಾ?
ಅಕ್ಕರಿಸಿದ ಮಗಳ ಗೆಲುವಿಗೆ
ಕಾದಿದ್ದ ತಂದೆಯೆದೆಗೆ ಬೆಂಕಿ ಇಡುವೆಯಾ?

ಹೇ ವರುಣನೆ,, ಉರಿವ ಮನಸಿಗೆ
ತಂಪು ನೀಡೆಯಾ??,,,,,

Sunday, August 6, 2017

ಸ್ನೇಹ

''"ಸ್ನೇಹ""
---------

''ಮಾತಿಲ್ಲದ ಮನದೊಳಗೆ
ಮೌನವೆಂಬ ಸ್ನೇಹವಿದೆ
ಮಾತಿನೊಳಗಿನ ಶಬ್ಧದೊಳಗೆ
ಭಾವನೆಯೆಂಬ ಸ್ನೇಹವಿದೆ.

ಸ್ನೇಹವೆಂಬ ಮಧುರಾಮೃತ
ಮನುಜನ ಮನಸಿಗೆ ಮಾತ್ರವೇ!
ಮೂಕ ಮನಸಿನ ಜೀವಜಗತ್ತಿಗೂ
ಸ್ನೇಹದ ಭಾವ ಸೀಮಾತೀತ.

ಬೆರೆಯೋ ಮನಸಿನ ಸ್ನೇಹ
ಬರೆಯೋ ಬರಹದ ಸ್ನೇಹ
ಅರಿಯೋ ಜ್ಞಾನದ ಸ್ನೇಹ
ಉಳಿಸೋ ಸಂಸ್ಕೃತಿಯ ಸ್ನೇಹ

ಬೆಳೆಸೋ ಪ್ರಕೃತಿಯ ಸ್ನೇಹ
ಕಲಿಸೋ ಪ್ರೀತಿಯ ಸ್ನೇಹ
ಕಾದಿರಿಸೋ ಭವಿಷ್ಯದ ಸ್ನೇಹ
ಆದರಿಸೋ ಹೆತ್ತವರ ಸ್ನೇಹ

ಬದಿಗಿರಿಸಿ ಬಿಂಕ ಮೋಹ
ಬೆಳೆಸಿರಿ ಸಂತಸದ ಸ್ನೇಹ
ಜೀವನ ರಸಘಳಿಗೆಯಲಿ
ಹರಿಯುತಿರಲಿ ಹಸಿರಿನ ಸ್ನೇಹ''

Sunday, June 25, 2017

ಅಮ್ಮಾ.

"ಪಂಚಭೂತಗಳಲಿ ಲೀನವಾದ್ರೂ ನೀನು,
ಮನಸಿನ ಪ್ರತಿ ಮೂಲೆಗಳಲೂ ಇರುವೆ,
ಉಸಿರಿನಾ ಬಿಸಿಗೆ ನಿನದೇ ನೆನಪಿದೆ,
ಬದುಕಿನಾ ಬಂಡಿಗೆ ನಿನದೇ ಹೆಸರಿದೆ.

ತಾಯಿಯಲ್ಲ ನೀ ನಿಜ ದೇವತೆ,
ನಾನಿರೋದೀಗ ಕಲ್ಲಿನಾ ಸಂತೆ,
ನಾನಿರುವೆನೆಂಬುದೇ ನಾನೀಗ ಮರೆತೆ,
ಬಾಳಿನುದ್ದಕ್ಕೂ ನೀನಿಲ್ಲವೆಂಬುದೇ ಕೊರತೆ."

Wednesday, November 23, 2016

""ಇಂದು - ನಾಳೆ""

''ಗೆಲುವಿನ ತರಂಗದಲೀ,
ಖುಷಿಯದೇ ನಲಿವಿರಲು,
ಸೋಲಿನ ಭಾವದಲೀ,
ನೋವಿಗೆ ಮಿತಿಯಿರಲಿ.

ಇಮದು ನಗುವ ಮಂದಿಗೆ,
ತುಂಬಲಿ ಅವರ ಜೋಳಿಗೆ,
ನಾಳೆ ನೀ ನಗುತಿರಲು,
ನಿನಗೂ ಸಿಗಲಿದೆ ಹೋಳಿಗೆ,

ಇಂದು-ನಾಳೆಗಳ ಬೈಗುಳದಿ,
ಕಳೆದುಕೊಳ್ಳಲು ಏನಿದೆ?
ಜೀವಂತ ನಡೆದರೇನೇ
ಜೀತದ ಫಲ ನಿಂದು ತಾನೆ!?''

Wednesday, September 28, 2016

"ಮನ-ಮಂಥನ"

"ಮನೆ ಮುರಿದರೆ
ಶಬ್ಧ ಘೋರ
ಮನ ಮುರಿದರೆ
ನೋವು ಘೋರ

ತಪ್ಪು ಸರಿಗಳ
ತುಲನೆ ಮಾಡಿ
ಬೇಕು ಬೇಡಗಳ
ವಿಚಾರ ಮಾಡಿ

ಬದುಕು ಏನೆಂದರು
ನಾವೆಣಿಸಿದ ಹಾಗಲ್ಲ
ಮನಸು ಏನೆಂದರೂ
ನಮ್ಮೊಳಗಿನ ನಾಯಕ‌"