Thursday, October 31, 2019

ಬಂತು ಬಂತು ನವೆಂಬರ್ ಒಂದು

ಬಂತು ಬಂತು ನವೆಂಬರ್ ಒಂದು
ನಮ್ಮ ಕನ್ನಡಮ್ಮನ ಹಬ್ಬವಿಂದು
ಇಂದಾದರೂ ನಾವಿಲ್ಲಿ ಒಂದು
ಎಂದೆನ್ನುತ ಲೋಕಕೆ ಸಾರೋಣವಿಂದು

ಹಿರಿಯರು ಕಟ್ಟಿದ ಈ ನಾಡು,
ಹಲವಾರು ವಿಶೇಷಗಳ ನೆಲೆವೀಡು,
ಏನಿಲ್ಲ ಎಂದು ಕೇಳುವ ಹಾಗೆ ಇಲ್ಲ
ಬೇಕೆಂಬುದೆಲ್ಲಾ ಇಲ್ಲಿ ಸಿಗದೇನಿಲ್ಲ

ಕನ್ನಡ ಎಂದರೆ ಕರುನಾಡ ಉಸಿರು
ಕರುನಾಡ ಮಕ್ಕಳಿಗೆ ಈ ಮಣ್ಣೇ ಉಸಿರು
ತಾಯೆಂದರೆ ಹೆತ್ತವಳು ಮಾತ್ರವಲ್ಲ
ಹೊತ್ತವಳ ತಾಯೆನ್ನಲು ಬಿಂಕ ಬೇಕಿಲ್ಲ.

ಕರುನಾಡೊಳಗೆ ಕನ್ನಡ ತಾಯಿಗೆ
ಆ ತಾಯಿಗೆ, ಕೊಡವ, ತುಳು, ಕೊಂಕಣಿ
ಹಲವು ಸೋದರಿಯರ ಬಾಂಧವ್ಯ.
ಸೋದರ ಮಕ್ಕಳಲ್ಲಿ ರಾಜಕೀಯದ ವೈಷಮ್ಯ.

ತೆಂಕಣದ ಬೀದರಿಂದ ಹಿಡಿದು ಬಡಗಣದ
ಚಾಮರಾಜನಗರ ತನಕ, ಮೂಡಣದ ಕೋಲಾರದಿಂದ
ಪಡುವಣದ ಗೋಕರ್ಣದ ತನಕ,
ಏನಿಲ್ಲ? ಏನೇನಿಲ್ಲ? ಬಲ್ಲವರು ಉಂಟೇನು?

ಕಾಲನ ಕೈಯಲ್ಲಿ ಕರುನಾಡು ಕೈಗೊಂಬೆ
ಕೈಯೊಳಗೆ ಮಣ್ಣಿನ ಮಕ್ಕಳು ಗೋಸುಂಬೆ
ಬೆಳೆವರು ತಿನ್ನುವರು ತರಾವರಿ ದಾಳಿಂಬೆ!!
ಆದರೂ ಅರ್ಥ ಮಾಡಿಕೊಳ್ಳದವರಿಗೆ ಏನೆಂಬೆ?

ಇಂದಲ್ಲ ನಾಳೆ, ಅಲ್ಲದಿದ್ದರೂ ಮುಂದೆ,
ನಗುವ ತಾಯಾಗಲಿ  ನಮ್ಮ ಕನ್ನಡಾಂಬೆ.
ಮನುಜ ಮತ ವಿಶ್ವಪಥ ಎನ್ನೋ ಮಾತು
ಇನ್ನಾದರೂ ಜಾರಿಯಾಗಲಿ ಕರುನಾಡ ಒಳಗೆ.

No comments:

Post a Comment